ರ್ಹೀನಿಯಮ್
ಆವರ್ತಕೋಷ್ಟಕದ 7ಬಿ ಗುಂಪಿನ 6ನೆಯ ಆವರ್ತದ ಧಾತು. ಇದು ಬೆಳ್ಳಿಬಿಳುಪಿನ ಅಪರೂಪದ ಲೋಹೀಯ ಧಾತು ಮತ್ತು ಅತಿಸಾಂದ್ರ ಧಾತುಗಳ ಪೈಕಿ ಒಂದು. ಪ್ರತೀಕ ಖe. ಪರಮಾಣು ಸಂಖ್ಯೆ 75. ಪರಮಾಣು ತೂಕ 186.2. ದ್ರವನಬಿಂದು 3,1800 ಸೆ. ಕುದಿಬಿಂದು 6270 ಸೆ. 200ಸೆ ನಲ್ಲಿ ಸಾಪೇಕ್ಷ ಸಾಂದ್ರತೆ 20.5. ಎಲೆಕ್ಟ್ರಾನ್ ವಿನ್ಯಾಸ 1s2 2s2 2p6 3s2 3p6 3d10 4s2 4p6 4d10 4f14 5s2 5p6 5d5 6s2. ವೇಲೆನ್ಸಿ 2, 3, 4, 5, 6, 7.

  ಟ್ಯಾಂಟಲೈಟ್, ವುಲ್‍ಫ್ರಮೈಟ್ ಮತ್ತು ಕೊಲಂಬೈಟ್ ಅದುರುಗಳ ಎಕ್ಸ್-ಕಿರಣ ರೋಹಿತ ದರ್ಶಕ ವಿಶ್ಲೇಷಣೆ ಮುಖೇನ  ವಾಲ್ಟರ್ ಕಾರ್ಲ್ ನೊಡ್ಡಾಕ್ (1893-1960), ಇವರ  ಪತ್ನಿ ಇಡಾ ಈವಾ ಟ್ಯಾಕ್ ನೊಡ್ಡಾಕ್ (1896-1978) ಮತ್ತು ಆಟ್ಟೋ ಕಾರ್ಲ್ ಬರ್ಗ್ ಎಂಬ ಜರ್ಮನ್ ರಸಾಯನವಿಜ್ಞಾನಿಗಳು ಇದನ್ನು ಆವಿಷ್ಕರಿಸಿದರು (1925). ರ್ಹೈನ್ ನದೀನಾಮದಿಂದ ಸ್ಫೂರ್ತಿ ಪಡೆದು ಈ ನೂತನ ಧಾತುವನ್ನು ರ್ಹೀನಿಯಮ್ ಎಂದು ಹೆಸರಿಸಲಾಯಿತು. ರಾಸಾಯನಿಕವಾಗಿ ಮ್ಯಾಂಗನೀಸನ್ನು ಹೋಲುವ ಇಂಥ ಒಂದು ಧಾತುವಿನ ಅಸ್ತಿತ್ವ ಕುರಿತು ದ್ಮಿತ್ರಿ ಇವಾನೊವಿಚ್ ಮೆಂದೆಲ್ಯೇವ್ (1834-1907) ರೂಪಿಸಿದ ಆವರ್ತ ನಿಯಮಾಧಾರಿತ ಭವಿಷ್ಯವಾಣಿಯನ್ನು (1869) ಈ ಆವಿಷ್ಕಾರ ನಿಜವಾಗಿಸಿತು.

 ಧಾತುಲಭ್ಯತೆಯ ಸಮೃದ್ಧಿ ಆಧಾರಿತ ಸರಣಿಯಲ್ಲಿ ಇದರ ಕ್ರಮಾಂಕ 79. ವಿವಿಧ ಖನಿಜಗಳಲ್ಲಿ 0.001 ಪಿಪಿಎಮ್ ಪ್ರಮಾಣದಲ್ಲಿರುವ ಈ ಧಾತು ಮಾಲಿಬ್ಡಿನೈಟಿನಲ್ಲಿ 20 ಪಿಪಿಎಮ್ ಮತ್ತು ತಾಮ್ರದ ಸಲ್ಫೈಡಿಕ್ ಅದುರುಗಳಲ್ಲಿ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಲಭ್ಯ. ವಿಕಿರಣಪಟು  ರ್ಹೀನಿಯಮ್-187 ಮತ್ತು ರ್ಹೀನಿಯಮ್-185 ಎಂಬ ಎರಡು ಸಮಸ್ಥಾನಿಗಳ ಮಿಶ್ರಣರೂಪ ನೈಸರ್ಗಿಕ  ರ್ಹೀನಿಯಮ್. ಮಾಲಿಬ್ಡಿನೈ ಟನ್ನು ಸ್ಫುಟೀಕರಿಸುವಾಗ (ಸ್ಮೆಲ್ಟಿಂಗ್) ಉತ್ಪತ್ತಿಯಾಗುವ ಹೊಗೆಕೊಳವೆ ದೂಳಿನಲ್ಲಿ(ಫ್ಲೂ ಡಸ್ಟ್) ಬಾಷ್ಪಶೀಲ ರ್ಹೀನಿಯಮ್ ಹೆಪ್ಟಾಕ್ಸೈಡ್ ಅಥವಾ ತಾಮ್ರದ ವಿದ್ಯುದ್ವಿಭಜನೀಯ ಸಂಸ್ಕರಣೆಯಲ್ಲಿ ಉತ್ಪತ್ತಿಯಾಗುವ ಆನೋಡ್ ರೊಚ್ಚಿನಲ್ಲಿ ಪ್ಲಾಟಿನಮ್ ಲೋಹಗಳೊಂದಿ ಗಿರುವ ಅದರ ಸಾಂದ್ರಗಳಿಂದ ರ್ಹೀನಿಯಮ್ ಆಹರಣ ಸುಲಭ.
ಇದು ಬಲು ಕಠಿಣ ಲೋಹ. ಸುಲಭವಾಗಿ ಸವೆಯುವುದಿಲ್ಲ, ತುಕ್ಕುಹಿಡಿಯುವುದೂ ಇಲ್ಲ. ಬಹುತೇಕ ಆಮ್ಲಗಳಲ್ಲಿ ನಿಧಾನವಾಗಿ ಲೀನಿಸುವುದಾದರೂ ಹೈಡ್ರೊಕ್ಲೋರಿಕಾಮ್ಲದಲ್ಲಿ ವಿಲೇಯವಲ್ಲ. ಶೀತ-ಕಾರ್ಯ (ಕೋಲ್ಡ್ ವರ್ಕಿಂಗ್) ಮತ್ತು ಅನ್ನೀಲನದಿಂದ ಇದರ ತಂತಿ ಹಾಗೂ ರೇಕುಗಳನ್ನು ತಯಾರಿಸಬಹುದು. ಟಂಗ್‍ಸ್ಟನ್ ಹೊರತು ಪಡಿಸಿದರೆ ಇದೇ ಕನಿಷ್ಠ ಸಂಲಯನಶೀಲ ಲೋಹ.
ವಿದ್ಯುತ್‍ತಂತು, ಬೆಸೆತ (ವೆಲ್ಡಿಂಗ್), ಸರಳು, ಉಷ್ಣಯುಗ್ಮ, ಅತಿಶೈತ್ಯ ಕಾರಿ ಕಾಂತ, ಕ್ಯಾಮೆರ ಫ್ಲ್ಯಾಶ್‍ಬಲ್ಬ್ ತಂತು ಇವುಗಳ ತಯಾರಿಕೆಯಲ್ಲಿ ಮತ್ತು ಕ್ರಿಯಾವರ್ಧಕವಾಗಿ ಬಳಕೆ ಇದೆ.	                           
 (ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ